ಪುನರ್ಜನ್ಮ- 
ಸತ್ತ ಮೇಲೆ ಮಾನವನ ಅಥವಾ ಪ್ರಾಣಿಯ ದೇಹ ನಾಶವಾದರೂ ಅವಿನಾಶಿಯಾದ ಆತ್ಮ ಮರುಹುಟ್ಟು ಪಡೆಯುತ್ತದೆ ಎಂಬ ನಂಬಿಕೆ ವೇದಗಳಿಗಿಂತ ಪ್ರಾಚೀನವಾದುದು. ಭಾರತದ ಅನೇಕ ಧರ್ಮಗಳು ಮತ್ತು ತತ್ತ್ವಶಾಸ್ತ್ರಗಳಿಗೆ ಪುನರ್ಜನ್ಮದಲ್ಲಿರುವ ನಂಬಿಕೆ ಮೂಲಭೂತವಾದದ್ದಾಗಿದೆ. ಈ ನಂಬಿಕೆಯ ಮೂಲ ಯಾವುದೆಂಬುದು ಅನಿರ್ದಿಷ್ಟವಾಗಿದೆ. ಭಾರತದಲ್ಲಿ ಆರ್ಯ ಪೂರ್ವ ಜನಾಂಗದಲ್ಲಿ ಆಚರಣೆಯಲ್ಲಿದ್ದ ಸತ್ಫಲಾಪೇಕ್ಷಿತ ಪೂಜೆಗಳ ರೂಪದಲ್ಲಿ ಈ ನಂಬಿಕೆ ಅಸ್ತಿತ್ವಕ್ಕೆ ಬಂದಿದ್ದಿರಬಹುದು. ಅನಂತರ, ಇವರನ್ನು ಆಕ್ರಮಿಸಿ ಬಂದ ಆರ್ಯ ಜನಾಂಗ ಸ್ಥಳೀಯ ಧರ್ಮಗಳ ಇತರ ಲಕ್ಷಣಗಳೊಡನೆ ಪುನರ್ಜನ್ಮದ ನಂಬಿಕೆಯನ್ನು ಉಳಿಸಿಕೊಂಡು ಬಂದಿರಬಹುದು. ಆರ್ಯರ ಧರ್ಮಶಾಸ್ತ್ರಗಳಲ್ಲಿ ಮೊತ್ತಮೊದಲನೆಯದಾದ ಋಗ್ವೇದದಲ್ಲಿ ಪುನರ್ಜನ್ಮದ ನಂಬಿಕೆಯ ಬಗ್ಗೆ ಸ್ಪಷ್ಟ ಸೂಚನೆ ಕಂಡುಬರುವುದಿಲ್ಲ. ಬದಲಾಗಿ ಸತ್ಯವಂತರ ಆತ್ಮಗಳು ಅವರು ಸತ್ತ ಅನಂತರ ಪಿತೃಲೋಕಕ್ಕೆ ಪ್ರಯಾಣ ಬೆಳೆಸುತ್ತವೆ, ಹೀಗೆ ಪ್ರಯಾಣ ಮಾಡಿ ಬಂದ ಆತ್ಮಗಳು ಅಲ್ಲಿ ಅಮರತ್ವವನ್ನು ಹೊಂದಿ, ಮೃತ್ಯುದೇವತೆಯಾದ ಯಮನ ಸ್ವರ್ಗಸಮಾನ ಆವಾಸ ಸ್ಥಾನದಲ್ಲಿಯ ವೈವಿಧ್ಯಮಯ ಸುಖಗಳನ್ನು ಅನುಭವಿಸುತ್ತವೆ. ಋಗ್ವೇದದ ಪ್ರಕಾರ ಸತ್ತ ಅನಂತರ ಪಾಪಿಗಳಿಗೆ ನರಕವೇ ಕೊನೆಯ ನೆಲೆಯಾಗಿರುವುದು. ಸಾವು ಎಂದರೆ ವಿನಾಶ ಎಂದಲ್ಲ. ಒಬ್ಬನ ಅರ್ಹತೆಗನುಗುಣವಾಗಿ ಸುಖ ಅಥವಾ ದುಃಖವನ್ನು ಅನುಭವಿಸುವುದಕ್ಕಾಗಿ ಬದುಕು ಇನ್ನೆಲ್ಲೋ ಮುಂದುವರಿಯುವುದು ಎಂದು ಅರ್ಥ.
ಪುನರ್ಜನ್ಮದ ಮೊತ್ತಮೊದಲಿನ ಸಿದ್ಧಾಂತ ಉಪನಿಷತ್ತುಗಳಲ್ಲಿ (ಕ್ರಿ.ಪೂ. ಸುಮಾರು 600) ಸಿಕ್ಕಿದೆ. ಅವುಗಳಲ್ಲಿ ಹೇಳಿರುವುದೇನೆಂದರೆ : ನೈತಿಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಜೀವನವನ್ನು ನಡೆಸಿ ಮೃತಿಹೊಂದಿದವರ ಆತ್ಮಗಳು ಪಿತೃಲೋಕಕ್ಕೆ (ಸ್ವರ್ಗಕ್ಕೆ) ಹೋಗುತ್ತವೆ. ಹಿಂದೆ ತಾವು ಮಾಡಿದ ಒಳ್ಳೆಯ ಜೀವನದ ಫಲವನ್ನು ಆ ಲೋಕದಲ್ಲಿ ಅನುಭವಿಸುತ್ತವೆ. ಅನಂತರ ಮಳೆಯ ರೂಪದಲ್ಲಿ ಭೂಮಿಗೆ ಮರಳಿ ಆಹಾರದ ರೂಪದಲ್ಲಿ ಮನುಷ್ಯರಿಂದ ಉಪಯೋಗಿಸಲ್ಪಡುತ್ತವೆ. ಕೊನೆಗೆ ಹೆಂಗಸರ ಗರ್ಭವನ್ನು ಪ್ರವೇಶಿಸಿ ಹೊಸ ದೇಹದಾರಿಗಳಾಗಿ ಪುನಃ ಹುಟ್ಟಿ ಬರುತ್ತವೆ. ಮೃತಿಹೊಂದಿದ ಪಾಪಿಗಳು ಪ್ರಾಣಿಗಳಾಗಿಯೂ, ಸಸ್ಯ, ಕ್ರಿಮಿ-ಕೀಟಗಳಾಗಿಯೋ ಪುನಃ ಜನಿಸಿ ಬರುತ್ತವೆ.

	ಪುನರ್ಜನ್ಮ ಸಿದ್ಧಾಂತದ ಈ ಉದಾಹರಣೆಗಳು ಕರ್ಮಸಿದ್ಧಾಂತದ ವಿವರಣೆಗಳಾಗಿವೆ. ಕರ್ಮವೆಂದರೆ ಕ್ರಿಯೆ ಅಥವಾ ಕೆಲಸ. ಈಗ ಏನನ್ನು ಬಿತ್ತುತ್ತೇವೆಯೊ ಅನಂತರ ಅದನ್ನೇ ಕೊಯ್ಯುತ್ತೇವೆ. ಸದಾಚಾರದ ಜೀವನದಿಂದ ಒಳ್ಳೆಯ ಪುನರ್ಜನ್ಮವೂ ದುರಾಚಾರದ ಜೀವನದಿಂದ ಕೆಟ್ಟ ಪುನರ್ಜನ್ಮವೂ ಸಂಭವಿಸುತ್ತವೆ. ಆದ್ದರಿಂದ, ಮನುಷ್ಯನ ಜೀವನ ಒಂದು ವ್ಯರ್ಥ ಸಾಧನೆ ಎಂದು ಪರಿಗಣಿಸಲಾಗುವುದಿಲ್ಲ. ಹಿಂದಿನ ಜೀವನದ ಒಳಿತು-ಕೆಡುಕುಗಳನ್ನು ಅನುಸರಿಸಿ ಇಂದಿನ ಜೀವನವಾಗಿದೆ. ಹಿಂದಿನ ಕರ್ಮಗಳಿಗನುಸಾರವಾಗಿ ಭವಿಷ್ಯದ ಬದುಕು ಇರುತ್ತದೆ. ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪುನರ್ಜನ್ಮ ಪರಂಪರೆ ಕೊನೆ ಇಲ್ಲದುದಾಗಿದೆ. ಧರ್ಮ ಮಾರ್ಗದಲ್ಲಿ ಅರ್ಥ, ಕಾಮಗಳನ್ನು ಗಳಿಸಿ, ಅನಂತರ ಎಂದು ಮನುಷ್ಯ ಜೀವಾತ್ಮ ಮತ್ತು ಪರಮಾತ್ಮಗಳ (ಬ್ರಹ್ಮ) ಐಕ್ಯವೆಂಬ ಮುಕ್ತರೂಪಿ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವನೊ ಅಂದು ಪುನರ್ಜನ್ಮ ಚಕ್ರದಿಂದ ಮುಕ್ತನಾಗುವನು: ಭಯಂಕರವಾದ, ನೋವಿನಿಂದ ಕೂಡಿದ ಈ ಹುಟ್ಟು ಸಾವಿನ ಚಕ್ರದಿಂದ ಎಂದೆಂದಿಗೂ ತಪ್ಪಿಸಿಕೊಂಡು ಹೋಗುವನು. ರಾಮಾನುಜ ಹಾಗೂ ಮಧ್ವಾಚಾರ್ಯ ಮುಂತಾದವರ ಕೆಲವು ಧಾರ್ಮಿಕ ತತ್ತ್ವಗಳಲ್ಲಿ ಹೇಳಿರುವುದೇನೆಂದರೆ ಮನುಷ್ಯನಾದವ ದೈವ ಮತ್ತು ಇತರ ಎಲ್ಲ ಚೇತನಗಳೊಡನೆ ಪ್ರೇಮ ಹಾಗೂ ಭಕ್ತಿಪೂರ್ವಕ ಸಮರಸ ಸಂಬಂಧವುಳ್ಳವನಾದಾಗ ಪುನರ್ಜನ್ಮದಿಂದ ಮುಕ್ತಿಯನ್ನು ಹೊಂದಬಹುದು ಎಂದಿದೆ. ಶಂಕರಾದ್ವೈತ ಮುಂತಾದ ದರ್ಶನಗಳಲ್ಲಿ ಎಂದೆಂದಿಗೂ ಒಂದೇ ಒಂದಾಗಿರುವ ಸತ್ಯದೊಡನೆ ತಾದಾತ್ಮ್ಯವನ್ನು ಹೊಂದುವ ಜ್ಞಾನದ ಮೂಲಕ ಪುನರ್ಜನ್ಮದಿಂದ ಮುಕ್ತರಾಗಬಹುದು ಎಂದಿದೆ. 
ಉಪನಿಷತ್ತುಗಳಲ್ಲಿ ರೂಪುಗೊಂಡಿರುವ ಪುನರ್ಜನ್ಮ ಹಾಗೂ ಕರ್ಮಸಿದ್ಧಾಂತಗಳು ಆಸ್ತಿಕ ಆರ್ಯ ಸಂಪ್ರದಾಯಗಳಿಂದ ಮೂಡಿ ಬಂದ ಹಿಂದೂ ಧರ್ಮದ ಅನೇಕ ಪಂಥಗಳ ಮೂಲಭೂತ ಸಿದ್ಧಾಂತಗಳಾಗಿವೆ. ಕ್ರಿ.ಪೂ. ಸುಮಾರು 600 ರಲ್ಲಿ ಕಾಣಿಸಿಕೊಂಡ ನಾಸ್ತಿಕಭಾವದ ಬೌದ್ಧ ಧರ್ಮ ಹಾಗೂ ಜೈನ ಧರ್ಮಗಳು ಪುನರ್ಜನ್ಮ ಸಿದ್ಧಾಂತವನ್ನು ಕೆಲವು ಮುಖ್ಯ ರೂಪಾಂತರಗಳೊಡನೆ ಸ್ವೀಕರಿಸಿವೆ. 

ಜೈನ ಧರ್ಮದ ಪ್ರಕಾರ, ಕರ್ಮ ಮನುಷ್ಯನ ಒಳ್ಳೆಯ ಅಥವಾ ಕೆಟ್ಟ ವರ್ತನೆಯ ಸೂಕ್ಷ್ಮವಾದ ಒಂದು ದ್ರವ್ಯವಾಗಿದೆ. ಇದು ಆತ್ಮಕ್ಕೆ ಅಂಟಿಕೊಂಡಿದ್ದು, ಆತ್ಮದ ಸಹಜ ಪ್ರಕಾಶವನ್ನು ಮರೆಮಾಡಿ, ಆತ್ಮವನ್ನು ಪ್ರಾಪಂಚಿಕ ಜೀವನಕ್ಕೆ ಒಳಗಾಗಿಸುತ್ತದೆ. ಎಲ್ಲ ಕೆಲಸಗಳೂ ಕರ್ಮವೇ ಆದರೂ ಅನ್ಯ ಜೀವಿಗಳಿಗೆ ನೋವನ್ನುಂಟುಮಾಡುವಂಥ ಕೆಲಸ ವಿಶೇಷವಾಗಿ ಘೋರಕರ್ಮವಾಗಿ ಪರಿಣಮಿಸುತ್ತದೆ. ಹಳೆಯ ಕರ್ಮದ ಹೊರೆ ಮತ್ತು ಹೊಸ ಕರ್ಮದ ನಿರಂತರ ಸಂಪಾದನೆ-ಇವು ಆತ್ಮವನ್ನು ಕೊನೆಯಿಲ್ಲದ ಜನ್ಮಾಂತರ ಸರಣಿಯ ಬಂಧನಕ್ಕೆ ವ್ಯಕ್ತಿಯನ್ನು ಕಟ್ಟಿ ಹಾಕುತ್ತವೆ. ಸತ್ತ ನಂತರ ಆತ್ಮವು ಹಿಂದಿನ ಕರ್ಮದ ಕವಚದೊಡನೆ ಹೊಸ ದೇಹದಲ್ಲಿ ಪುನಃ ಹುಟ್ಟಿಬರುತ್ತದೆ. ಈ ಹೊಸ ದೇಹದ ಸ್ವಭಾವಗಳು ಹಿಂದಿನ ಕರ್ಮದ ಗುಣಾವಗುಣಗಳಿಂದ ನಿರ್ಧರಿಸಲ್ಪಟ್ಟಿರುತ್ತವೆ. ಧಾರ್ಮಿಕ ಸಂಯಮಗಳ ಮೂಲಕ ಹಳೆಯ ಕರ್ಮಗಳನ್ನು ನಾಶಗೊಳಿಸಿ, ಅಹಿಂಸೆ ಮುಂತಾದ ಒಳ್ಳೆಯ ನಡತೆಗಳಿಂದ ಹೊಸ ಕರ್ಮಗಳು ಅಂಟುವುದನ್ನು ತಡೆಯುವುದೇ ಆಧ್ಯಾತ್ಮಿಕ ಜೀವನದ ಗುರಿ. ಕರ್ಮಬಂಧನದಿಂದ ಮುಕ್ತವಾದ ಆತ್ಮ ವಿಶ್ವದ ಅತೀ ಎತ್ತರಕ್ಕೆ ಏರುತ್ತದೆ. ಅಲ್ಲಿ, ಅದು ನಿರಂತರವೂ ಆನಂದದಾಯಕವಾದ ಸರ್ವಜ್ಞ ಮತ್ತು ನಿರ್ಲಿಪ್ತ ಅವಸ್ಥೆಯಲ್ಲಿ ನೆಲೆಗೊಳ್ಳುತ್ತದೆ. 

ಬೌದ್ಧ ಧರ್ಮ ಜನ್ಮಾಂತರದ ನಂಬಿಕೆಯನ್ನು ಒಪ್ಪಿಕೊಂಡಿದ್ದಾಗ್ಯೂ ಎಂದೂ ಬದಲಾಗದ ಆತ್ಮದ ಅಸ್ತಿತ್ವವನ್ನು ನಿರಾಕರಿಸುತ್ತದೆ. ಈ ಧರ್ಮದ ಪ್ರಕಾರ ಸರ್ವಸಾಮಾನ್ಯವಾಗಿ ಆತ್ಮವೆಂದು ಕರೆಯಲ್ಪಡುತ್ತಿರುವ ವಸ್ತು ಮಾನಸಿಕ ಮತ್ತು ಭೌತಿಕ ಮೂಲ ವಸ್ತುಗಳ ಸಂಯುಕ್ತ ಸ್ಥಿತಿಗಿಂತ ಬೇರೇನೂ ಆಗಿಲ್ಲ. ಅಲ್ಲದೆ, ಈ ಸಂಯುಕ್ತ ಸ್ಥಿತಿ ಪ್ರತಿ ಕ್ಷಣವೂ ಬದಲಾಗುತ್ತಿರುತ್ತದೆ. ಮೂಲ ವಸ್ತುಗಳ ಐದು ರಾಶಿಗಳಾದ (5 ಸ್ಕಂದಗಳು) ರೂಪ (ದೇಹ), ವೇದನೆ, ಸಂಜ್ಞೆ, ಸಂಸ್ಕಾರ ಮತ್ತು ಪ್ರಜ್ಞೆಗಳು ಸಾವಿನಲ್ಲಿ ನಿಷ್ಕ್ರಿಯವಾಗುತ್ತವೆ. ಈ ಸ್ಥಿತಿಯಲ್ಲಿ ವ್ಯಕ್ತಿ ಅಸ್ತಿತ್ವದಲ್ಲಿಲ್ಲದಂತಾಗುತ್ತದೆ. ಈ ಸ್ಥಿತಿ ಜೀವನದ ಕೊನೆಯಲ್ಲ. ಇದು ಒಂದು ಹೊಸ ವ್ಯಕ್ತಿತ್ವದ ಆರಂಭ. ಕರ್ಮದಿಂದಾಗಿ ವ್ಯಕ್ತಿ ವೈಶಿಷ್ಟ್ಯವೂ ಉಳಿಯುತ್ತದೆ ಮತ್ತು ಪ್ರಜ್ಞೆಯ (ವಿಜ್ಞಾನ) ಬೀಜ ರೂಪದಲ್ಲದು. ತಾಯಿಯ ಗರ್ಭವನ್ನು ಸೇರುತ್ತದೆ. ಅಲ್ಲಿ ಹೊಸ ವ್ಯಕ್ತಿಯಾಗಿ ಬೆಳೆಯುತ್ತದೆ. ಈ ಹೊಸ ವ್ಯಕ್ತಿಯ ಲಕ್ಷಣಗಳು ಜೀವಾಣುವಿನಲ್ಲಿರುವ ಕರ್ಮಶಕ್ತಿಯ ಗುಣಾವಗುಣಗಳನ್ನು ಅವಲಂಬಿಸಿರುತ್ತವೆ. 

ಬೌದ್ಧ ಶಾಖೆಗಳೊಳಗೆ ಐದು ರೀತಿಯ ಪುನರ್ಜನ್ಮದ ಸ್ಥಿತಿಗಳು ಗುರುತಿಸಲ್ಪಟ್ಟಿವೆ. ನಾರಕಜನ್ಮ, ಪ್ರಾಣಿಜನ್ಮ, ಪಿಶಾಚ ಜನ್ಮ, ಮನುಷ್ಯ ಜನ್ಮ ಮತ್ತು ದೇವ ಜನ್ಮ. ಈ ಜನ್ಮಗಳಾವುವು ನಿರಂತರವಾಗಿರುವುದಿಲ್ಲ. ಕರ್ಮಕ್ಕನುಸಾರವಾಗಿ ಜನ್ಮಾಂತರಗಳು ನಡೆಯುತ್ತಿರುತ್ತವೆ. ಹೀಗೆ, ಜನ್ಮಾಂತರಗಳನ್ನು ಹೊಂದುವ ಮತ್ತು ಬದಲಾಗದ ಆತ್ಮವಸ್ತುವೊಂದು ಇಲ್ಲದಿದ್ದಾಗ್ಯೂ ವ್ಯಕ್ತಿ ವೈಶಿಷ್ಟ್ಯ ಅವಿರತ ಕರ್ಮದಿಂದಾಗಿ ಮುಂದುವರಿಯುತ್ತಿರುತ್ತದೆ. ಈ ವೈಶಿಷ್ಟ್ಯ ದೇವರ ಚಕ್ರವನ್ನು ಸಂಸಾರ ಚಲನೆಯಲ್ಲಿಟ್ಟಿದೆ. ಅಂದರೆ ಎಲ್ಲ ಕಾಮನೆಗಳು (ತೃಷ್ಣೆಗಳು) ಶಾಶ್ವತವಾದ ಮತ್ತು ಅಚಲವಾದ ಆತ್ಮ ಇದೆ ಎಂಬ ಭ್ರಮೆಯ ಮೇಲೆ ನಿಂತಿವೆ. ನೈತಿಕ ಶಿಸ್ತು ಮತ್ತು ಧ್ಯಾನಗಳ ಮೂಲಕ ಪೂರ್ನ ನಿರ್ಮೋಹವೂ ಜ್ಞಾನದ ಅವಸ್ಥೆಯನ್ನು ಹೊಂದಿದಾಗ ಕರ್ಮತಾಟಸ್ಥ್ಯವೂ ಲಭಿಸುತ್ತವೆ. ಪುನರ್ಜನ್ಮ ಇಲ್ಲವಾಗುತ್ತದೆ. ನಿರ್ವಾಣವೆಂಬ ನಿರಂತರ ಆನಂದ ಸ್ಥಿತಿ ಪ್ರಾಪ್ತಿಯಾಗುತ್ತದೆ. 

ಮಹಾನ್ ದಾರ್ಶನಿಕನಾದ ಪ್ಲೇಟೋನ ಕೆಲವು ಕೃತಿಗಳಲ್ಲಿಯೂ ಪುನರ್ಜನ್ಮದ ಪ್ರಸ್ತಾಪವಿದೆ. ಕೇಂಬ್ರಿಜ್ ತತ್ತ್ವಜ್ಞಾನಿ ಜಾನ್ ಮೆಕ್‍ಟಗಾರ್ಟನಿಂದಲೂ ಈ ತತ್ತ್ವ ಪುರಸ್ಕøತವಾಗಿದೆ. ಪುನರ್ಜನ್ಮದ ಬಗ್ಗೆ ಆಧುನಿಕ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. 
(ಬಿ.ಕೆ.ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ